ಬೆಂತಮ್, ಜಾರ್ಜ್  
 1800-84.  ಪ್ರಸಿದ್ಧ ಸಸ್ಯ ವಿಜ್ಞಾನಿ.  ಇಂಗ್ಲೆಂಡಿನ ಸ್ಟೋಕ್ ಎಂಬಲ್ಲಿ 1800 ಸೆಪ್ಟೆಂಬರ್ 22 ರಂದು ಜನನ.  ತಂದೆ ಸ್ಯಾಮ್ಯುಯಲ್ ಬೆಂತಮ್ ನೌಕಾಪಡೆಯ ಅಧಿಕಾರಿ.  ಸ್ಥಳದಿಂದ ಸ್ಥಳಕ್ಕೆ ಕೆಲಸದ ಮೇಲೆ ತಿರುಗಾಡಬೇಕಾದ ಪರಿಸ್ಥಿತಿ ಇದ್ದುದರಿಂದ ಬೆಂತಮನ ಪ್ರಾಥಮಿಕ ಶಿಕ್ಷಣ ಖಾಸಗಿಯಾಗಿ ನಡೆಯಿತು.  1805 ರಿಂದ 1807ರ ತನಕ ಪೀಟರ್ಸ್ ಬರ್ಗ್‍ನಲ್ಲಿ ರಷ್ಯನ್, ಫ್ರೆಂಚ್, ಜರ್ಮನ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿತ.  ಅನಂತರ ಫ್ರಾನ್ಸಿನಲ್ಲಿ ಶಿಕ್ಷಣ ಮುಂದುವರಿಸಿ ತತ್ತ್ವಜ್ಞಾನ, ಗಣಿತ, ವಿಜ್ಞಾನ, ಫ್ರೆಂಚ್ ಮತ್ತು ಲ್ಯಾಟಿನ್ ಸಾಹಿತ್ಯಗಳಲ್ಲಿ ಪರಿಣತಿಗಳಿಸಿದ್ದರೂ ಸಸ್ಯವಿಜ್ಞಾನದ ಕಡೆಗೆ ವಿಶೇಷ ಒಲವು ಬೆಳೆಸಿಕೊಂಡ.  ಸಸ್ಯ ವರ್ಗೀಕರಣದಲ್ಲಿ ಹೆಸರು ಪಡೆದಿದ್ದ ಆಲ್ಫೊನ್ಸೆ ಡಿ ಕ್ಯಾನ್‍ಡೋಲ್ ಬರೆದ ಪ್ಲೋರೆ ಫ್ರಾಂಕಾಸ್ ಎಂಬ ಪುಸ್ತಕದಿಂದ ಪ್ರಭಾವಿತನಾದ ಬೆಂತಮ್ ತನ್ನ ಜೀವನದ ಐವತ್ತು ವರ್ಷಕ್ಕೂ ಹೆಚ್ಚು ಕಾಲವನ್ನು ಸಸ್ಯವರ್ಗೀಕರಣ ಕಾರ್ಯದಲ್ಲೇ ಕಳೆದ.  ತನ್ನ ಸಂಶೋಧನಾ ಅವಧಿಯಲ್ಲಿ ಸಂಗ್ರಹಿಸಿದ್ದ ಲಕ್ಷಕ್ಕೂ ಹೆಚ್ಚು ಸಸ್ಯ ಮಾದರಿಗಳನ್ನು ಕ್ಯೂ ಎಂಬಲ್ಲಿರುವ ರಾಯಲ್ ಸಸ್ಯ ವಿಜ್ಞಾನ ಸಂಸ್ಥೆಗೆ ಕೊಡುಗೆಯಾಗಿ ನೀಡಿದ (1854).  ಅನಂತರ ವಿಲಿಯಮ್ ಹೂಕರ್ ಎಂಬುವನ ಜೊತೆಗೆ ತನ್ನ ಸಂಶೋಧನೆ ಮುಂದುವರಿಸಿ ಲೇಖನಗಳನ್ನೂ ಪುಸ್ತಕಗಳನ್ನೂ ಬರೆದ. 

	ಬೆಂತಮನಿಗೆ ಸಂದ ಪುರಸ್ಕಾರ ಪ್ರಶಸ್ತಿಗಳು ಹಲವು:  ರಾಯಲ್ ಸೊಸೈಟಿ ಪದಕ (1859), ಲಿನೆ ಸೊಸೈಟಿ ಅಧ್ಯಕ್ಷ (1861), ರಾಂiÀiಲ್ ಸೊಸೈಟಿ ಫೆಲೊ (1863), ಕೇಂಬ್ರಿಜ್ ವಿಶ್ವವಿದ್ಯಾಲಯದ ಎಲ್.ಎಲ್.ಡಿ ಪದವಿ (1874), ಈತನ ಮುಖ್ಯ ಗ್ರಂಥಗಳು ಲೇಬಿಯೇ ಟೇರಮ್ ಜೆನೆರ ಎಟ್ ಸ್ಟೀಶೀಸ್ (1832-36), ಹ್ಯಾಂಡ್ ಬುಕ್ ಆಫ್ ದಿ ಬ್ರಿಟಿಷ್ ಪ್ಲೋರ (1858), ಪ್ಲೋರ ಹಾಂಗ್‍ಕಾಂಗೆನ್‍ಸಿಸ್ (1861), ಜೆನೆರ ಪ್ಲಾನ್ ಟೇರಮ್ (1862-83), ಪ್ಲೋರ ಆಸ್ಟ್ರೇಲಿಯೆನ್‍ಸಿಸ್ (1863-78), ಆನ್ ದಿ ರೀಸೆಂಟ್ ಪ್ರೋಗ್ರೆಸ್ ಅಂಡ್ ಪ್ರೆಸೆಂಟ್ ಆಫ್ ಸಿಸ್ಟಮ್ಯಾಟಿಕ್ ಬಾಟನಿ (1875).  

	1884 ಸೆಪ್ಟೆಂಬರ್ 10 ರಂದು ಲಂಡನ್ನಿನಲ್ಲಿ ಮರಣ ಹೊಂದಿದ.  
(ಡಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ